ಪರಿತ್ಯಜನ -
ಪತಿಪತ್ನಿಯರಲ್ಲಿ ಒಬ್ಬರು ಇನ್ನೊಬ್ಬರನ್ನು ಸಮಂಜಸ ಕಾರಣವಿಲ್ಲದೆ, ಅವರ ಒಪ್ಪಿಗೆಯಿಲ್ಲದೆ, ಅವರ ಇಚ್ಛೆಗೆ ವಿರುದ್ಧವಾಗಿ ತ್ಯಜಿಸುವುದು, ತೊರೆಯುವುದು (ಡೆಸರ್ಷನ್). ಒಬ್ಬರು ಇನ್ನೊಬ್ಬರನ್ನು ಬುದ್ಧಿಪೂರ್ವಕವಾಗಿ ಅಲಕ್ಷಿಸುವುದೂ ಪರಿತ್ಯಜನದ ಅರ್ಥವ್ಯಾಪ್ತಿಯಲ್ಲಿ ಬರುತ್ತದೆ. ಪರಿತ್ಯಜನ ವಿವಾಹ ಸಂಬಂಧವಾದ ಅಪರಾಧ. ಪರಸ್ಪರ ಒಪ್ಪಿಗೆಯಿರುವ, ಸಕಾರಣವಾದ ಇಲ್ಲವೇ ನ್ಯಾಯಾಲಯದ ತೀರ್ಪಿನ ಬೆಂಬಲವಿರುವ ತೊರೆಯುವಿಕೆ ಪರಿತ್ಯಜನವೆನಿಸದು. ತೊರೆಯುವಿಕೆ ಬುದ್ಧಿಪೂರ್ವಕವಾದದ್ದು ಮತ್ತು ಉದ್ದೇಶಪೂರ್ವಕವಾದದ್ದು ಇನ್ನೊಬ್ಬರ ಇಚ್ಛೆಗೆ ವಿರುದ್ಧವಾದ್ದು. ಇನ್ನೊಬ್ಬರ ಸ್ಪಷ್ಟ ಇಲ್ಲವೇ ಸೂಚಿತ ಒಪ್ಪಿಗೆಯಿಲ್ಲದ್ದು ಹಾಗೂ (ಕಾನೂನಿನ ದೃಷ್ಟಿಯಲ್ಲಿ) ಸಮಂಜಸ ಕಾರಣವಿಲ್ಲದ್ದು ಆಗಿದ್ದರೆ ಮಾತ್ರ ಅದು ಪರಿತ್ಯಜನವೆನಿಸುತ್ತದೆ. ಪರಿತ್ಯಜನ ವೈವಾಹಿಕ ಹೊಣೆಗಾರಿಕೆಯ ಪೂರ್ಣ ನಿರಾಕರಣೆ. ಒಂದು ಸ್ಥಳದಿಂದ ದೂರ ಇರುವುದಾಗಿರದೆ. ಒಂದು ವಸ್ತುಸ್ಥಿತಿಯಿಂದ ಹಿಂದೆಗೆಯುವುದು ಪರಿತ್ಯಜನ ಎನ್ನಬಹುದು. ಅದು ನಿರಂತರ ಅಪರಾಧ. ಪತಿಪತ್ನಿಯರ ಅಗಲಿಕೆ ಪರಿತ್ಯಜನದ ಮುಖ್ಯಾಂಶಗಳಲ್ಲೊಂದು ಅವರು ಒಟ್ಟಾಗಿ ಜೀವನ ನಡೆಸುವವರೆಗೆ ಪರಿತ್ಯಜನ ಇರುವುದಿಲ್ಲ. ಆ ಸಮಯದಲ್ಲಿ ಒಬ್ಬರು ನಿರಂತರವಾಗಿ ಮತ್ತು ಬುದ್ಧಿಪೂರ್ವಕವಾಗಿ ಇನ್ನೊಬ್ಬರೊಂದಿಗೆ ಸಂಭೋಗವನ್ನು ನಿರಾಕರಿಸುತ್ತಿದ್ದರೂ ಅದು ಪರಿತ್ಯಜನವಾಗದು. ಆದರೆ ಅಂಥ ನಿಷ್ಕಾರಣ ನಿರಾಕರಣೆಯಿಂದಾಗಿ ಅವರಿಗೆ ಇನ್ನೊಬ್ಬರು ತಮ್ಮನ್ನು ತ್ಯಜಿಸಬಹುದೆಂಬ ಅರಿವಿರುವುದು ಸಾಧ್ಯವಿರುವುದರಿಂದ, ಹಾಗೆ ನಿರಾಕರಿಸುವವರು ಅನುಮೇಯ (ಕನ್‍ಸ್ಟ್ರಕ್ಟಿವ್) ಪರಿತ್ಯಜನದ ತಪ್ಪಿತಸ್ಥರಾಗಬಹುದು. ಪತಿಪತ್ನಿಯರು ಒಂದೆ ಕಡೆಯಲ್ಲಿ ವಾಸಿಸುತ್ತಿದ್ದರೂ ಅಸಾಧಾರಣ ಪರಿಸ್ಥಿತಿಯಲ್ಲಿ ಒಬ್ಬರು ಇನ್ನೊಬ್ಬರಿಂದ ಪೂರ್ತಿ ಪ್ರತ್ಯೇಕವಾಗಿರುವುದರ ಫಲವಾಗಿ ಅಲ್ಲಿ ಒಂದು ಕುಟುಂಬವಿರದೆ ಎರಡು ಕುಟುಂಬಗಳಿವೆ. ಎಂದು ನ್ಯಾಯಾಲಯ ಹೇಳುವಂತಿದ್ದರೆ ಆಗ ಪರಿತ್ಯಜನದ ಅಪರಾಧ ಸಾಬೀತಾಗಬಹುದು.

ಪತಿಪತ್ನಿಯರಲ್ಲಿ ಒಬ್ಬರು ಇನ್ನೊಬ್ಬರನ್ನು ನಿಷ್ಕಾರಣವಾಗಿ ಬಲಾತ್ಕಾರದಿಂದ ಹೊರದೂಡಿದಲ್ಲಿ ಇಲ್ಲವೇ ತಮ್ಮ ಉದ್ದೇಶಪೂರ್ವಕ ವರ್ತನೆಯಿಂದ ಇನ್ನೊಬ್ಬರಿಗೆ ತಮ್ಮೊಡನೆ ಇರುವುದು ಅಸಾಧ್ಯವಾಗುವಂತೆ ಮಾಡಿ ಆ ಕಾರಣ ಅವರು ವಾಸಸ್ಥಾನವನ್ನು ಬಿಟ್ಟು ಬೇರೆ ಇರುವಂತೆ ಮಾಡಿದಲ್ಲಿ, ವಾಸಸ್ಥಾನದಿಂದ ಹೊರಹಾಕಿದವರು ಇಲ್ಲವೇ ಅನಿವಾರ್ಯವಾಗಿ ಬೇರೆ ವಾಸಿಸುವಂತೆ ಮಾಡಿದವರು ಪರಿತ್ಯಜನದ ತಪ್ಪಿತಸ್ಥರಾಗುತ್ತಾರೆ. ಅಂಥ ಸಂದರ್ಭಗಳಲ್ಲಿ ತಪ್ಪು ಬೇರೆ ವಾಸಿಸುವವರದಾಗಿರದೆ ಅವರು ಹಾಗೆ ವಾಸಿಸುವಂತೆ ಮಾಡಿದವರದಾಗುತ್ತದೆ. ಅವರು ತಮ್ಮ ಬುದ್ಧಿಪೂರ್ವಕ ವರ್ತನೆಯ ಪರಿಣಾಮವನ್ನು ಊಹಿಸಬಲ್ಲವರಾಗಿದ್ದು ಇನ್ನೊಬ್ಬರು ತಮ್ಮಿಂದ ದೂರ ವಾಸಿಸುವಂತೆ ಮಾಡುವುದು ಅವರ ಉದ್ದೇಶವಾಗಿತ್ತೆಂದು ಭಾವಿಸಲಾಗುತ್ತದೆ.

ಇನ್ನೊಬ್ಬರನ್ನು ತ್ಯಜಿಸುವ ಇಲ್ಲವೇ ಇನ್ನೊಬ್ಬರು ತಮ್ಮನ್ನು ತ್ಯಜಿಸುವಂತೆ ಮಾಡುವ ಉದ್ದೇಶ ದಂಪತಿಗಳಲ್ಲಿ ಒಬ್ಬರಿಗೆ ಇರುವುದು ಪರಿತ್ಯಜನಾಪರಾಧದ ಒಂದು ಮುಖ್ಯ ಅಂಶ. ತ್ಯಜನ, ತ್ಯಜಿಸುವ ಉದ್ದೇಶ-ಇವು ಒಟ್ಟುಗೂಡಿದಾಗ ಪರಿತ್ಯಜನದ ಅಪರಾಧ ಪ್ರಾರಂಭವಾಗುತ್ತದೆ. ಇವೆರಡೂ ಏಕಕಾಲದಲ್ಲಿ ಪ್ರಾರಂಭವಾಗಬೇಕಿಲ್ಲ. ತ್ಯಜಿಸಿದವರು ಇಲ್ಲವೇ ತ್ಯಜಿಸುವುದಕ್ಕೆ ಕಾರಣರಾದವರು ಮನಃಪೂರ್ವಕವಾಗಿ ಪರಿತ್ಯಕ್ತರ ಜೊತೆಯಲ್ಲಿ ಮತ್ತೆ ಒಟ್ಟಾಗಿ ವಾಸಿಸುವ ಮತ್ತು ವೈವಾಹಿಕ ಜೀವನವನ್ನು ಮುಂದುವರಿಸುವ ಇಚ್ಛೆಯನ್ನು ಪ್ರಕಟಿಸಿ ಮುಂದೆ ಬಂದಲ್ಲಿ ಪರಿತ್ಯಜನ ಅಂತ್ಯಗೊಳ್ಳುತ್ತದೆ. ಅಂಥ ಸಂದರ್ಭಗಳಲ್ಲಿ ಪರಿತ್ಯಕ್ತರು ಅವರ ವಾಸಸ್ಥಾನಕ್ಕೆ ಹಿಂದಿರುಗಿ ವೈವಾಹಿಕ ಜೀವನವನ್ನು ಮುಂದುವರಿಸುವುದನ್ನು ಸಮಂಜಸ ಕಾರಣವಲ್ಲದೆ ನಿರಾಕರಿಸುವಂತಿಲ್ಲ. ಪರಿತ್ಯಜನ ಮಾಡಿದವರ ವಿರುದ್ಧವಾಗಿ ಪರಿತ್ಯಕ್ತರು ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿ ದಾಂಪತ್ಯಹಕ್ಕನ್ನು ಮತ್ತೆ ಪಡೆಯುವುದರ ಬಗ್ಗೆ ತೀರ್ಪು ಪಡೆಯಬಹುದು.

ಪರಿತ್ಯಜನ ಕುರಿತ ಕಾನೂನುಗಳು ವಿವಿಧ ದೇಶಗಳಲ್ಲಿ ವಿಭಿನ್ನವಾಗಿವೆ. ಪರಿತ್ಯಜನದ ಒಂದು ನಿರ್ದಿಷ್ಟ ಅವಧಿಯ ಅನಂತರ ನ್ಯಾಯಿಕ ಅಗಲಿಕೆಗೆ (ಜ್ಯುಡಿಷಿಯಲ್ ಸೆಪರೇಷನ್) ಅಥವಾ ವಿವಾಹವಿಚ್ಛೇದಕ್ಕೆ ಅವಕಾಶ ಇರುತ್ತದೆ. ಕನಿಷ್ಠ ಎರಡು ವರ್ಷಗಳ ಕಾಲ ಪರಿತ್ಯಕ್ತಾವ್ಯಸ್ಥೆಯಲ್ಲಿದ್ದವರು ನ್ಯಾಯಿಕ ಅಗಲಿಕೆಗಾಗಿ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಬಹುದೆಂದು ಹಿಂದೂ ವಿವಾಹ ಅಧಿನಿಯಮದ 10ನೆಯ ಖಂಡದಲ್ಲಿ ಹೇಳಲಾಗಿದೆ. ಪರಿತ್ಯಾಗ ಮಾಡಿದ ವ್ಯಕ್ತಿ ಪರಿತ್ಯಕ್ತ ವ್ಯಕ್ತಿಯೊಡನೆ ಮೊದಲಿನಂತೆಯೇ ವಿವಾಹಜೀವನವನ್ನು ಮುಂದುವರಿಸುವುದಾಗಿ ಇಚ್ಛಿಸಿ, ನ್ಯಾಯಿಕ ಅಗಲಿಕೆಗಾಗಿ ಪರಿತ್ಯಕ್ತ ವ್ಯಕ್ತಿ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸುವ ಮೊದಲೇ ತನ್ನ ಆ ಉದ್ದೇಶವನ್ನು ವ್ಯಕ್ತಪಡಿಸಿದ್ದಲ್ಲಿ ಪರಿತ್ಯಜನ ಅಂತ್ಯಗೊಳ್ಳುತ್ತದೆ.

ತಾನು ಕೈಹಿಡಿದ ಪತ್ನಿಗೆ ಮತ್ತು ತಮ್ಮನ್ನು ಅವಲಂಬಿಸಿರುವ ಮಕ್ಕಳಿಗೆ ಅನ್ನ, ಆಶ್ರಯ, ಬಟ್ಟೆ ಮೊದಲಾದ ಅವಶ್ಯಕತೆಗಳನ್ನೊದಗಿಸವುದು ಪತಿಯ ಕರ್ತವ್ಯ. ಪತಿ ಪರಿತ್ಯಜನದ ತಪ್ಪುಗಾರನಾಗಿದ್ದಲ್ಲಿ ಅವನು ಪತ್ನಿಯ ಮತ್ತು ಮಕ್ಕಳ ಜೀವನಕ್ಕೆ ಹಣ ಒದಗಿಸುವುದು ಅನಿವಾರ್ಯವಾಗುತ್ತದೆ. ಅಂಥ ಸಂದರ್ಭದಲ್ಲಿ ಪತ್ನಿ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದಲ್ಲಿ ನ್ಯಾಯಲಯ ಜೀವನಾಂಶವನ್ನು ಕೂಡಿಸಬಹುದು. ಹೀಗೆ ಕೊಡಿಸಲಾಗುವ ಜೀವನಾಂಶದ ಮೊಬಲಗು ಎಷ್ಟೆಂಬುದು ವಾಸ್ತವಿಕ ಸಂದರ್ಭಗಳನ್ನು ವಿಶೇಷ ಸಂದರ್ಭಗಳನ್ನು ವಿಶೇಷವಾಗಿ ಕಕ್ಷಿಗಳ ಜೀವನಸ್ಥಿತಿ, ಆದಾಯ, ಗಳಿಕೆ ಮತ್ತು ಅವಶ್ಯಕತೆಗಳನ್ನೂ ಅವಲಂಬಿಸಿರುತ್ತದೆ. ಆದರೆ 1955ರ ಹಿಂದೂ ವಿವಾಹ ಅಧಿನಿಯಮದ ಖಂಡ 24ರ ಪ್ರಕಾರ ನ್ಯಾಯಲಯ ಪತಿ ಇಲ್ಲವೇ ಪತ್ನಿ ಸಲ್ಲಿಸುವ ನ್ಯಾಯಿಕ ಅಗಲಿಕೆಗೆ ಇಲ್ಲವೇ ಅನಂತರದ ವಿವಾಹ ವಿಚ್ಛೇದನಕ್ಕೆ ಅರ್ಜಿಯ ಖರ್ಚನ್ನೂ ಆ ಅವಧಿಯಲ್ಲಿ ಜೀವನಾಂಶವನ್ನೂ ಅರ್ಜಿಸಲ್ಲಿಸುವವರ ಮತ್ತು ಪ್ರತಿವಾದಿಯ ವರಮಾನಕ್ಕೆ ಅನುಗುಣವಾಗಿ ಕೂಡಿಸಬಹುದು. 

ಜವಾಬ್ದಾರಿ ಹೊತ್ತವರು ತಮ್ಮ ಕರ್ತವ್ಯಸ್ಥಾನವನ್ನೂ (ಕರ್ತವ್ಯ ಚ್ಯುತಿಯಾಗುವ ರೀತಿಯಲ್ಲಿ) ಸೂಕ್ತ ಅನುಮತಿಯಿಲ್ಲದೆ ತ್ಯಜಿಸುವುದು, ಎಂಬುದು ಪರಿತ್ಯಜನ ಪದದ ಸಾಮಾನ್ಯ ಅರ್ಥವಾಗಿದೆ. ನೌಕಾ, ಭೂ ಮತ್ತು ವಾಯುಪಡೆಗಳಲ್ಲಿರುವವರು ತಮ್ಮ ಕಾರ್ಯಸ್ಥಾನವನ್ನು ಯೋಗ್ಯ ಆದೇಶವಿಲ್ಲದೆ ಮತ್ತು ಆ ಸ್ಥಾನಕ್ಕೆ ಹಿಂದಿರುಗುವ ಉದ್ದೇಶವಿಲ್ಲದೆ ಬಿಡುವುದು ಗಂಭೀರವಾದ ಮತ್ತು ಕಠಿಣಶಿಕ್ಷಾರ್ಹವಾದ ಅಪರಾಧವಾಗುತ್ತದೆ.								(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ